Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

sharjaa karnataka sangha celebrates 5th anniversary

ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ
»ಹೆಚ್ಚಿನ ವರದಿ ಚಿತ್ರಗಳು

ಚಿತ್ರ: ಬಿ.ಜಿ.ಮೋಹನದಾಸ್ ಅವರಿಗೆ ಮಯೂರ ಪ್ರಶಸ್ತಿ ಪ್ರದಾನ

ಶಾರ್ಜಾ, ಡಿಸೆಂಬರ್ ೨೨: ಶಾರ್ಜಾ ಕರ್ನಾಟಕ ಸಂಘದ ಐದೆನೆಯ ವಾರ್ಷಿಕೋತ್ಸವ ಕಳೆದ ರಾತ್ರಿ ವಿಭಿನ್ನ ರೀತಿಯಲ್ಲಿ ನಡೆದು ಅಭೂತಪೂರ್ವ ಯಶಸ್ಸು ಕಂಡಿತು. ಯು.ಎ.ಇ.ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕನ್ನಡಪರ ಕಾರ್ಯಕ್ರಮವೊಂದು ತೆರೆದ ಕ್ರೀಂಡಾಂಗಣದಲ್ಲಿ ನಡೆಸಿರುವುದಲ್ಲದೇ ಇನ್ನೂ ಹಲವಾರು -ಯು.ಎ.ಇ. ಯಲ್ಲಿ ಪ್ರಥಮ ಬಾರಿಗೆ- ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿತು. ಪ್ರಖರ ಹೊನಲು ಬೆಳಕು, ಸುಸಜ್ಜಿತ ವೇದಿಕೆ, ಸ್ವಾದಿಷ್ಠ ಉಪಾಹಾರ ಸಹಿತ ಹಚ್ಚಹಸುರಿನ ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ನೆರೆದ ಐನೂರಕ್ಕೂ ಹೆಚ್ಚಿನ ಕನ್ನಡಿಗರಲ್ಲಿ ರೋಮಾಂಚನ ಮೂಡಿಸಿತ್ತು.

ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಗಮಿಸಿದ್ದ ಕನ್ನಡದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೀಮತಿ ಬಿ.ಆರ್. ಛಾಯಾ ಹಾಗೂ ಖ್ಯಾತ ರಂಗಕಲಾವಿದ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸುವಲ್ಲಿ ತಮ್ಮ ಕಾಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಇದೇ ಪ್ರಥಮ ಬಾರಿಗೆ ಕಿಶೋರಿಯೊಬ್ಬಳು (ಕುಮಾರಿ ಪ್ರಶೋಭಿತ) ವೇದಿಕೆಯಲ್ಲಿ ಸ್ಪಷ್ಟಕನ್ನಡದಲ್ಲಿ ನಿರೂಪಣೆ ನೀಡುವ ಮೂಲಕ ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕನ್ನಡದ ನಿರೂಪಕಿಯಾದ ಅತಿ ಕಿರಿಯ ಬಾಲಕಿ ಎಂದು ಗುರುತಿಸಲ್ಪಟ್ಟಿದ್ದಾರೆ. ತನ್ನ ಪ್ರತಿಭೆಯನ್ನು ಸುಲಲಿತವಾಗಿ ಧಾರೆ ಎರೆದ ಕಿಶೋರಿ ಮುಂದೆ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸುವ ಎಲ್ಲಾ ಭರವಸೆಗಳನ್ನು ನೀಡಿದ್ದಾಳೆ. ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ಯಕ್ಷಗಾನದ ಪ್ರಮುಖ ವಾದ್ಯವಾದ ಚಂಡೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನವಪೀಳಿಗೆಗೆ ಕನ್ನಡ ಕಲಿಸಿ ಎಂಬ ಸಂದೇಶವನ್ನು ಹೊತ್ತ ಸುಂದರವೇದಿಕೆ ಬರುವ ಪೀಳಿಗೆಯು ಕನ್ನಡದಿಂದ ವಂಚಿತರಾಗಬಾರದೆಂಬ ಸಂದೇಶವನ್ನು ಸಾರುವ ಫಲಕವೂ ಪ್ರಥಮ ಬಾರಿಯಾಗಿದೆ.

ಕು.ಪ್ರಶೋಭಿತಾ ಮತ್ತು ಅಶ್ವಿನ್ ಸುಭ್ರಹ್ಮಣ್ಯ  ಹಾಡಿದ  ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಮನಸೂರೆಗೊಂಡ ನೃತ್ಯಗಳು, ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರ ಭಾಷಣಗಳು, ಕಿರುನಾಟಕಗಳು, ವಿಶೇಷವಾಗಿ ರೂಪಾ ಹಾಗೂ ದಿವ್ಯಾ ನಡೆಸಿಕೊಟ್ಟ ಭಾಗ್ಯದ ಬಳೆಗಾರ ನೃತ್ಯ ಮತ್ತು ಕಾಸರಗೋಡು ಚಿನ್ನಾ ಮತ್ತು ಸ್ಥಳೀಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ಮೂಕಾಭಿನಯ ಆರು ಘಂಟೆಗಳಿಗೂ ಹೆಚ್ಚು ನಡೆದು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಕಂಡಿತು.

ಶಾರ್ಜಾ ಕರ್ನಾಟಕ ಸಂಘದ ಪ್ರತಿವರ್ಷ ಸನ್ಮಾನಿಸುತ್ತಾ ಬಂದಿರುವ ಪ್ರತಿಷ್ಠಿತ -ಮಯೂರ ಪ್ರಶಸ್ತಿ-ಯನ್ನು ದುಬೈ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾಗಿದ್ದ ಶ್ರೀ ಬಿ.ಜಿ.ಮೋಹನದಾಸ್ ಅವರಿಗೆ ಅರ್ಹವಾಗಿ ಪ್ರದಾನಿಸಲಾಯಿತು. ಬೀಜಿ ಎಂದೇ ಆತ್ಮೀಯರಲ್ಲಿ ಹಾಸುಹೊಕ್ಕಾಗಿರುವ ಶ್ರೀ ಮೋಹನದಾಸ್ ಅವರ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಕನ್ನಡ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಾಗಿ ಅವಿರೋಧವಾಗಿ ಅವರ ಆಯ್ಕೆಯಾಗಿತ್ತು.  ಈ ಪ್ರಶಸ್ತಿಯನ್ನು ಶ್ರೀ ಮೋಹನದಾಸ್ ದಂಪತಿಗಳಿಗೆ ವೇದಿಕೆಯಲ್ಲಿ ಪ್ರದಾನಿಸಿದ ಗಣ್ಯರಲ್ಲಿ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಶೇಖರ್ ಬಾಬು ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಹಾಗೂ ಇತರರು ಪ್ರಸ್ತುತರಿದ್ದರು.  ಶ್ರೀ ಮಾರ್ಕ್ ಡೆನ್ನಿಸ್ ಅವರು ಪ್ರಶಸ್ತಿ ವಿಜೇತರಿಗೆ ಕನ್ನಡದ ಪೇಟ ತೊಡಿಸಿ ಸನ್ಮಾನಿಸಿದರು. ಶ್ರೀ ಸರ್ವೋತ್ತಮ ಶೆಟ್ಟಿಯವರು ಶಾಲು ಹೊದಿಸಿ, ಶ್ರೀ ಸುಜಯ್ ಬೆಂದೂರ್ ದಂಪತಿಗಳು ಹಾರ ತೊಡಿಸಿ, ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಾಂತಾರಾಮ್ ಆಚಾರ್ ಅವರು ಸನ್ಮಾನ ಪತ್ರ ವಿಷದಪಡಿಸಿ, ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು -ಮಯೂರ ಪ್ರಶಸ್ತಿ ಫಲಕ-ವನ್ನು ಪ್ರದಾನಿಸಿದರು.

ತಮ್ಮ ಭಾಷಣದಲ್ಲಿ ಮಯೂರ ಪ್ರಶಸ್ತಿ ವಿಜೇತರಾದ ಶ್ರೀ ಬಿ.ಜಿ.ಮೋಹನದಾಸ್ ಅವರು ತಮಗೆ ಸಿಕ್ಕ ಈ ಪ್ರಶಸ್ತಿ ತಮಗೆ ಮಾತ್ರವಲ್ಲದೆ ತಮ್ಮ ಕೆಲಸಗಳಿಗೆ ಸರಿಸಮನಾಗಿ ಹೆಗಲುಕೊಟ್ಟು ಸಹಕರಿಸಿದ ಅರ್ಧಾಂಗಿಯವರಿಗೂ ಸಲ್ಲಬೇಕೆಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮಕ್ಕೆ ಇನ್ನೂ ಹಲವಾರು ಕನ್ನಡದ ಕಾರ್ಯಗಳಲ್ಲಿ ಸಾಧನೆ ಮಾಡಿದವರ ಇತರರನ್ನೂ ಸನ್ಮಾನಿಸಲಾಯಿತು.  ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಶೇಖರ್ ಬಾಬು ಶೆಟ್ಟಿ, ರೋಟೇರಿಯನ್ ಪಿ.ಎಚ್.ಎಫ್ ಹಾಗೂ ಖ್ಯಾತ ಪತ್ರಕರ್ತ ಶ್ರೀ ಪುಂಡಲೀಕ ಮರಾಠೆ, ಗಲ್ಫ್ ಯಕ್ಷಗಾನ ಕಲಾವಿದ ಚಿದಾನಂದ ಪೂಜಾರಿ ದಂಪತಿಗಳು, ಬ್ಯಾರಿ ಕವಿ ಹನೀ ಪರ್ಲಿಯಾರ್, ಕರ್ನಾಟಕದಿಂದ ಆಗಮಿಸಿರುವ ಕಲಾವಿದರಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀಮತಿ ಬಿ.ಆರ್. ಛಾಯಾ ಮತ್ತು ಪದ್ಮಪಾಣಿ ದಂಪತಿಗಳಿಗೆ ಸಂಘದ ಸಂಪ್ರದಾಯದಂತೆ ಫಲ, ಪುಷ್ಪ, ಸನ್ಮಾನಪತ್ರ, ಹಾಗೂ ಫಲಕಗಳೊಂದಿಗೆ ಸನ್ಮಾನಿಸಲಾಯಿತು.

ತಮ್ಮ ಅಧ್ಯಕ್ಷಭಾಷಣದಲ್ಲಿ ಶ್ರೀ ಪ್ರಭಾಕರ ಅಂಬಲ್ತೆರೆಯವರು ಯು.ಎ.ಇ.ಯಲ್ಲಿರುವ ಎಲ್ಲಾ ಕನ್ನಡ ಸಂಘಗಳು ಜೊತೆಗೂಡಿ ಒಂದಾಗಿ ಕಾರ್ಯನಿರ್ವಹಿಸುವಂತೆ ಕರೆನೀಡಿದರು.  ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ನೀಡಬೇಕಾದ ಸವಲತ್ತುಗಳಿಗೆ ಆದ್ಯತೆ ನೀಡುವಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಭಾವುಕರಾಗಿ ನುಡಿದರು.

ಎಂದಿನ ತಮ್ಮ  ಆತ್ಮೀಯ ಶೈಲಿಯಲ್ಲಿ ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಾಂತಾರಾಮ್ ಆಚಾರ್ ರವರು ಸಂಘದ ವಾರ್ಷಿಕ ಕಲಾಪಗಳ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಹಿರಿಯ ಕೊಂಕಣಿ ನಾಯಕ ಬಸ್ತಿ ವಾಮನ ಶಣೈ, ಉದ್ಯಮಿ ಶ್ರೀ ಅಶೋಕ್ ಶೆಟ್ಟಿ, ಡಾ. ಶ್ಯಾಮ್ ಸುಂದರ್, ಹೋಟೆಲ್ ಉದ್ಯಮಿ ಪ್ರವೀಣ್ ಕುಮಾರ್ ಹಾಗೂ ಮೈಸೂರ್ ಪ್ಯಾಲೇಸ್ ರೆಸ್ಟೋರೆಂಟ್ ಮಾಲಿಕರಾದ ಶ್ರೀ ಎಸ್.ಎಸ್.ರಾವ್ ಪ್ರಸ್ತುತರಿದ್ದರು.

ಸ್ಥಳೀಯ ಪ್ರತಿಭೆ ಹಾಗೂ ಕಾಸರಗೋಡು ಚಿನ್ನಾ ಅವರ ಅನುಭವೀ ನಿರ್ದೇಶನ ಸೇರಿದರೆ ಏನಾಗಬಹುದೆಂಬುದಕ್ಕೆ  ನಡೆದ ಮನರಂಜನಾ ಕಾರ್ಯಕ್ರಮಗಳೇ ಸಾಕ್ಷಿ.  ಕಾಸರಗೋಡು ಚಿನ್ನಾ ಹಾಗೂ ಸ್ಥಳೀಯರಿಂದ ಅಲ್ಪಕಾಲದ ತರಬೇತಿಯಿಂದ ಪ್ರದರ್ಶಿಸಲ್ಪಟ್ಟ ಮೂಕಾಭಿನಯ ಎಲ್ಲರ ಮನಸೆಳೆಯಿತು. ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡುಗಳನ್ನು ಖ್ಯಾತ ಗಾಯಕರಷ್ಟೇ ಸಮರ್ಥವಾಗಿ ಹಾಡಬಲ್ಲ ಶ್ರೀ ರವಿರಾಜ್ ತಂತ್ರಿಯವರು ಅನೇಕ ಹಾಡುಗಳನ್ನು ಹಾಡಿ ರಂಜಿಸಿದರು. ಅದರಲ್ಲೂ ಬಭ್ರುವಾಹನ ಚಿತ್ರದ ಆರಾಧಿಸುವೆ ಮತ್ತು ಇಂದಿನ ಜಯಪ್ರಿಯ ಅನಿಸುತಿದೆ ಯಾಕೋ ಇಂದು…. ಹಾಡುಗಳು ವೀಕ್ಷಕರನ್ನು ಜಯಂತ ಕಾಯ್ಕಿಣಿಯವರ ಹಾಡನ್ನು ಗುನುಗುನಿಸುವಂತೆ ಮೋಡಿ ಮಾಡಿತ್ತು.

ಇನ್ನೋರ್ವ ಸ್ಥಳೀಯ ಗಾಯಕರಾದ ಶ್ರೀ ಡೋನಾಲ್ಡ್ ಅವರೂ ತಮ್ಮ ಪ್ರತಿಭೆ ಮೆರೆದರು. ಬಿ.ಆರ್. ಛಾಯಾ ಅವರೊಡನೊಡಗೂಡಿ ನೀಡಿದ ಸುಗಮ ಸಂಗೀತ, ಹಾಗೂ ಇನ್ನಿತರ ಹಾಡುಗಳು ವೀಕ್ಷಕರ ಮನಸೂರೆಗೊಂಡವು. ಭಾಗ್ಯದ ಬಳೆಗಾರ ಹಾಡನ್ನು ನೃತ್ಯರೂಪಕ ನೀಡಿದ ರೂಪಾ ಹಾಗೂ ದಿವ್ಯಾ ಅವರೂ ತಮ್ಮ ಪ್ರತಿಭೆ ಮೆರೆದರು.  ಕಿಶೋರರಾದ ಜತಿನ್, ತನ್ವಿ, ಕೃತಿ ಹಾಗೂ ಖುಷಿ ಯವರಿಂದ ನಡೆದ ಚಂದಾಮಾಮಾ ಬಾ ನೃತ್ಯರೂಪಕವೂ ಜನಮನಸೆಳೆಯಿತು. ಶೈಲಜಾ ಯಾದವ ಕೋಟ್ಯಾನ್, ರಕ್ಷಾ ಶಿವಚಂದ್ರ, ಸುಪ್ರಿಯಾ ವಿನೋದ ಕಾಂಚನ್, ನಂದಿತಾ ಸುನಿಲ್, ಸುಚೇತಾ ದೀಪಕ್ ಆಮೀನ್ ಹಾಗೂ ಶಶಿಕಲಾ ಸುಂದರ್ ಕಾಂಚನ್ ಅವರ ತಂಡವು ಲವಲವಿಕೆಯಿಂದ ನರ್ತಿಸಿದ ತೇರು ನೃತ್ಯರೂಪಕ ಅತ್ಯಂತ ಸುಂದರವಾಗಿ ಮೂಡಿಬಂದಿತು.

ಕಾರ್ಯಕ್ರಮದ ನಿರೂಪಣೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರು ನಡೆಸಿಕೊಟ್ಟರು. ಇವರಿಗೆ ನಿರೂಪಣೆಯಲ್ಲಿ ಕಿಶೋರಿ ಪ್ರಶೋಭಿತಾ ಅಂಬಲ್ತೆರೆ, ಪ್ರಭಾಕರ ಶೆಣೈ ಹಾಗೂ ಸ್ವರ್ಣ ಸತೀಶ್ ಪೂಜಾರಿಯವರು ಬೆಂಬಲ ನೀಡಿದರು. ಶ್ರೀ ಪ್ರಭಾಕರ ಶೆಣೈಯವರು ವಂದನಾರ್ಪಣೆ ಸಲ್ಲಿಸಿದರು.

ಡಿಸೆಂಬರ್ ತಿಂಗಳ ಚುಮು ಚುಮು ಚಳಿಯಲ್ಲಿಯೂ ಆಗಮಿಸಿದ್ದ ಐನೂರಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಕಾರ್ಯಕ್ರಮದಲ್ಲಿ ಕಡೆಯವರೆಗೂ ಪ್ರಸ್ತುತರಿದ್ದು ಯಶಸ್ವಿಗೊಳಿಸಿದರು.

ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ಸಹಿತ ಪರೋಕ್ಷವಾಗಿ ನೆರವಾದ ಎಲ್ಲರೂ ಈ ಯಶಸ್ಸಿಗಾಗಿ ಅಭಿನಂದನಾರ್ಹರು. ಮನರಂಜನಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದ ಶ್ರೀ ವಿಶ್ವನಾಥ ಶೆಟ್ಟಿಯವರು ಕಾಸರಗೋಡು ಚಿನ್ನಾ ಮೂಕಾಭಿನಯನದ ತಂಡದಲ್ಲಿಯೂ ಪಾತ್ರ ವಹಿಸಿ ತಮ್ಮ ಪ್ರತಿಭೆ ಮೆರೆದರು.

ಶ್ರೀಮತಿ ಬಿ.ಆರ್. ಛಾಯಾ ಅವರ ಅನೇಕ ಕನ್ನಡ ಹಾಡುಗಳು ನೆರೆದವರ ಮನಸೂರೆಗೊಂಡವು.  ಶ್ರೀ ಕಾಸರಗೋಡು ಚಿನ್ನಾ ಅವರ ಮೂಕಾಭಿನಯ, ಹಾಸ್ಯಲಹರಿ ನೆರೆದವರನ್ನು ನಗೆಗಡಲಿನಲ್ಲಿ ಮುಳುಗಿಸಿದವು.  ಇತ್ತೀಚೆಗೆ ಉಡುಪಿಯಲ್ಲಿ ನಡೆದ ೭೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀ ಪುಂಡಲೀಕ ಮರಾಠೆಯವರು ಉಡುಪಿಯಿಂದ ಆಗಮಿಸಿದ್ದು ಶಾರ್ಜಾ ಕನ್ನಡ ಸಂಘ ಈ ಹಿಂದೆ ಪ್ರಸ್ತಾವಿಸಿದ್ದ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಶೀಲನೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂಬ ಸಿಹಿಸುದ್ದಿಯನ್ನು ಪ್ರಕಟಿಸಿದರು. ಉಡುಪಿಯಿಂದ ವಿಶೇಷವಾಗಿ ತನ್ನೊಂದಿಗೆ ತಂದಿದ್ದ ನೆನಪಿನ ಕಾಣಿಕೆಯನ್ನೂ ಅವರು ಶ್ರೀ ಶೇಖರಶೆಟ್ಟಿಯವರ ಮುಖಾಂತರ ಸಂಘದ ಅಧ್ಯಕ್ಷರಿಗೆ ನೀಡಿದರು.

ಒಟ್ಟಾರೆ ಸಂತೋಷ ಸಂಜೆಯಾಗಿ ಮಾರ್ಪಟ್ಟ -ಕುಟುಂಬ ಉತ್ಸವ- ಸಂಭ್ರಮ, ಸಡಗರ ಹಾಗೂ ಉಲ್ಲಾಸಕರವಾಗಿ ನಡೆದು ಆಗಮಿಸಿದ್ದವರನ್ನು ಹಲಕಾಲ ನೆನಪಿನಲ್ಲಿಡುವಂತೆ ಮಾಡಿತು. ಶ್ರೀ ಗಣೇಶ್ ರೈಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ  ಚಳಿಯ ನೆಪ ಹೂಡಿ ಕಂಬಳಿ ಹೊದ್ದು ಮಲಗಿ ಈ ಕಾರ್ಯಕ್ರಮಕ್ಕೆ ಬರದೇ ಇದ್ದವರು ನತದೃಷ್ಟರು.

http://www.gulfkannadiga.com/news-1262.html

Advertisements

December 25, 2007 - Posted by | GULF- http://www.gulfkannadiga.com/

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: