Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Music – Practical Possibility of Raga-Tala

Music – Practical Possibility of Raga-Tala

ರಾಗ-ತಾಳಗಳ `ವಾಸ್ತವಸಾಧ್ಯತೆ’

– ಒಂದು ಪರ್‍ಯಾಲೋಚನೆ

ಈ ನನ್ನ ಕಿರುಬರೆಹದಲ್ಲಿ ಕೇವಲ ಕೆಲವೊಂದು ವಿಚಾರಗಳ ಪ್ರಸ್ತಾವವನ್ನಷ್ಟೇ ಮಾಡಬಲ್ಲೆ ನಲ್ಲದೆ ವಿಶದ ಚರ್ಚೆಯನ್ನಲ್ಲ. ಸೀಮಿತ ಪುಟಗಳ ವ್ಯಾಪ್ತಿಯಲ್ಲಿ ದಿಙತ್ರವಾಗಿ ಮುಖ್ಯಾಂಶಗಳತ್ತ ತೋರುಬೆರಳನ್ನು ಚಾಚಲಷ್ಟೇ ಅಳವಿರುವುದಲ್ಲದೆ ಯುಕ್ತಿ-ಪ್ರತಿಯುಕ್ತಿಗಳ, ವಾದ-ಪ್ರತಿವಾದ ಗಳ ಸಾಧಾರ-ಸರ್ವಾಂಗೀಣಪ್ರತಿಪಾದನೆಗೆ ಎಡೆಯಿಲ್ಲ. ಆದರೆ ನಾನಿಲ್ಲಿ ಹೇಳಲಿರುವ ಎಲ್ಲ ವಿಚಾರ ಗಳಿಗೂ ಶಾಸ್ತ್ರ-ಯುಕ್ತಿ-ಅನುಭವಗಳ ಆಧಾರವನ್ನಲ್ಲದೆ ವೈಜ್ಞಾನಿಕ ಪರಿಷ್ಕಾರವನ್ನೂ ಸಹ ಒದಗಿಸಬಲ್ಲೆನೆಂಬ ಭರವಸೆಯನ್ನು ನೀಡುತ್ತಿದ್ದೇನೆ. ಮುಂದೊಮ್ಮೆ ಸಮಯ-ಸಂದರ್ಭ-ಅವಕಾಶ ಗಳೊದಗಿದಾಗ ಅಂಥ ವ್ಯಾಪಕಲೇಖನವನ್ನೂ ಜಿಜ್ಞಾಸುಗಳ ಅವಗಾಹನೆಗಾಗಿ ಮಂಡಿಸುವ ಉದ್ದೇಶವಂತೂ ಇದ್ದೇ ಇದೆ ; ಆ ದಿಶೆಯಲ್ಲಿ ಪ್ರತ್ಯೇಕವಾದ ಬರೆವಣಿಗೆ ಸಾಗಿಯೂ ಇದೆ. ಇದು ಕೇವಲ ಅಂಥ ಪ್ರೌಢಲೇಖನದ ಉಪಕ್ರಮ, ಸಂಗ್ರಹವೆಂದಷ್ಟೇ ಹೇಳಬಹುದು. ಇಲ್ಲಿ ಸೂಚಿತ ವಾಗಲಿರುವ ವಿಚಾರಗಳು ಅನೇಕರಿಗೆ ಕಹಿಯಾಗಿಯೂ ಅಸಮರ್ಪಕವಾಗಿಯೂ ಪರಂಪರೆಯ ವಿಶ್ವಾಸಕ್ಕೆ ವಿರೋಧವಾಗಿಯೂ ತೋರಬಹುದು. ಆದರೆ ಅವೆಲ್ಲಕ್ಕೂ ತತ್ತ್ವ-ಪ್ರಯೋಗಗಳ ಆನುಭವಿಕಸಾಕ್ಷ್ಯವುಂಟೆಂದೂ ಪರಸ್ಪರ ಚರ್ಚೆಗಳಿಂದ ಅದನ್ನು ಮನದಟ್ಟಾಗಿಸಬಹುದೆಂದೂ ಹೇಳಬಯಸುತ್ತೇನೆ. ಅಷ್ಟೇ ಅಲ್ಲ, ಕಲಾಸಂಪನ್ನವೂ ಶಾಸ್ತ್ರಸಂಸ್ಕೃತವೂ ಆದ ತರ್ಕಪರಿಷ್ಕೃತ ಮನಸ್ಸು ನಿರಾಗ್ರಹದಿಂದ ಪರಿಭಾವಿಸಿದಾಗ ಇಂಥ ನಿಲವುಗಳಿಗೆ ಬರುವುದು ಅನುಭವಗಮ್ಯ ವೆಂದೂ ನಿವೇದಿಸಬಯಸುವೆ. ಇಂಥ ಪೀಠಿಕೆಯಾದರೂ ಚಿಕಿತ್ಸಕ-ಚಿಂತಕರಿಗೆ ಅನವಶ್ಯ. ಆದರೆ ಸಂಗೀತಕ್ಷೇತ್ರದಲ್ಲಿ ಪಾರಂಪರಿಕಶ್ರದ್ಧೆಯು ಬಹುಮಟ್ಟಿಗೆ ಪ್ರಶ್ನಾತೀತವಾಗಿ ಅಂಗೀಕೃತವಾದ ಕಾರಣ ಈ ವಿಸ್ತಾರವು ಅನಿವಾರ್‍ಯವಾಯಿತು.

ಮೊತ್ತಮೊದಲಿಗೆ ಸಂಗೀತಕಲೆಯನ್ನು ಸಮುದ್ರದಷ್ಟು ವಿಸ್ತಾರ ಎಂದು ಹೇಳುವ ಮಾತನ್ನವಲಂಬಿಸಿಬರುವ ಇನ್ನೊಂದು ಮಾತು – ಪ್ರತಿಯೊಂದು ರಾಗವೂ ಅಪಾರ ವಿಸ್ತಾರವನ್ನು ಹೊಂದಿದೆ, ಅದರ ಎಲ್ಲೆಯನ್ನು ಕಂಡವರಿಲ್ಲ ; ಅದನ್ನು ಖಾಲಿಮಾಡುವುದೇ ಆಗದು – ಎಂಬುದನ್ನು ನೋಡೋಣ. ದಿಟವೇ. ಯಾವ ಕಲೆಯೂ ವಿಸ್ತಾರವಿಲ್ಲದೆ ಬಹುಕಾಲ ರಂಜಿಸದು. ನಮ್ಮ ಶಾಸ್ತ್ರೀಯಸಂಗೀತಕ್ಕೂ ಸಹ ಒಳ್ಳೆಯ ಹರಹು ಇರುವುದೇ ಹೌದು. ಆದರೆ ರಾಗವೊಂದು ಎಷ್ಟು ವಿಸ್ತಾರ ? ರಾಗವೊಂದನ್ನು ಅದೆಷ್ಟು ಹೊತ್ತು ಹಾಡಲು ಸಾಧ್ಯ ? ಈ ಬಗೆಗೆ ನಮ್ಮ ಸಂಗೀತವಲಯದಲ್ಲಿ ಅತಿರಂಜಿತವಾದ ಉತ್ಪ್ರೇಕ್ಷೆ-ಅತಿಶಯೋಕ್ತಿ-ಅತ್ಯುಕ್ತಿಗಳೇ ವಾಸ್ತವದ ನೆಲೆಯನ್ನಡರಿವೆ. ಭೈರವಿ, ಸಾವೇರಿ, ಕಲ್ಯಾಣಿ, ತೋಡಿ, ಶಂಕರಾಭರಣಗಳಂಥ ರಾಗಗಳನ್ನು ಗಂಟೆಗಟ್ಟಲೆ (ದಿನಗಟ್ಟಲೆ ಎಂದೂ ಕೆಲವರ ಅಂಬೋಣ ; ಮತ್ತೆ ಕೆಲವರು ಮುಂದೊಡ್ಡುವ ಐತಿಹ್ಯ) ಹಾಡಬಹುದೆಂದೂ ನಾವೇ ಹಾಡಬಲ್ಲೆವೆಂದೂ ಅನೇಕರು ಹೇಳುತ್ತಾರೆ. ಆದರೆ ಪುನರುಕ್ತಿಯಿಲ್ಲದೆ ರಾಗವೊಂದನ್ನು ಅದೆಷ್ಟು ಕಾಲ ಹಾಡಲು ಸಾಧ್ಯವೆಂಬುದನ್ನು ಮೊದಲು ಚಿಂತಿಸಬೇಕಲ್ಲವೇ ! ಸ್ವರಗಳಿಂದ ಕೂಡಿದ ರಾಗವು ಆಯಾ ಸ್ವರಗಳ ಕಿemಡಿbಡ್ಝ್ಟಿಟಿ bಟಿಜ ಈmಛ್ಝಿಟಿbಡ್ಝ್ಟಿಟಿ (ಪರಿವರ್ತನ ಮತ್ತು ಸಂಯೋಜನ) ಕ್ರಮಗಳಿಂದಲ್ಲವೇ ರೂಪುಗೊಳ್ಳುವುದು ! ಇದಾದರೋ ಆಯಾ ರಾಗಗಳ ಸ್ವರಸಂಖ್ಯಾನುಸಾರವಾಗಿ ಗಣಿತಕ್ಕೆ ಸಿಕ್ಕುವಂಥದ್ದೇ. ಇಂಥ ಗಣಿತಲಬ್ಧ ಸಂಭಾವ್ಯ ಸ್ವರಗುಚ್ಛ ಶ್ರೇಣಿಯು ಮೇಯವಲ್ಲದೆ ಅಮೇಯವೆಂದೂ ಆಗದು. ಇದನ್ನು ದ್ರುತ-ಮಧ್ಯ-ವಿಳಂಬಗತಿ ಗಳಲ್ಲಿ, ಮಂದ್ರ-ಮಧ್ಯ-ತಾರಸ್ಥಾಯಿಗಳಲ್ಲಿ ಹಾಡುವ ಮೂಲಕ ಇನ್ನಷ್ಟು ವೈವಿಧ್ಯವು ಉಂಟಾಗು ವುದು ದಿಟ. ಆದರೆ ಈ ಸಂದರ್ಭಗಳಲ್ಲಿ ರಾಗವೊಂದರ ಎಲ್ಲ ಗಣಿತೀಯಸ್ವರಸಂಕ್ರಮಸಾಧ್ಯತೆ ಗಳೂ ಗಾಯಕನಿಗೆ ಆ ಹೊತ್ತಿಗೆ ಸ್ಫುರಿಸುವುವೆಂದು ಹೇಳುವುದು ಸಾಹಸದ ಮಾತು. ಹೀಗಾಗಿ ಮೇಯ ಸ್ವರಸಂಕ್ರಮಶ್ರೇಣಿಯಲ್ಲಿಯೇ ಸಾಧ್ಯಸ್ವರಸಂಕ್ರಮಶ್ರೇಣಿಯು ಸಾಕಷ್ಟು ಹ್ರಸ್ವಗೊಳ್ಳುವ ಕಾರಣ ಮಿತಿಯು ಮತ್ತಷ್ಟು ಹೆಚ್ಚುವುದು ಸ್ಪಷ್ಟ.

ಅಲ್ಲದೆ ಪ್ರತಿಯೊಂದು ರಾಗಗಳ ವ್ಯಕ್ತೀಕರಣಕ್ಕಾಗಿ ಆಯಾ ರಾಗಗಳಿಗೇ ವಿಶಿಷ್ಟವಾದ ಕೆಲವೊಂದು ಸ್ವರಸಂಚಾರಗಳು (ಅಂಶ-ಗ್ರಹ-ನ್ಯಾಸಾದಿರೂಪದಿಂದ, ವಾದಿ-ಸಂವಾದಿ ವಿಧಾನದಿಂದ) ಬರಲೇ ಬೇಕಾದುದು ಅನಿವಾರ್ಯ ಮತ್ತು ಪುನರಾವರ್ತಿತವಾಗ ಬೇಕಾದುದೂ ಅನಿವಾರ್ಯ. ಇವುಗಳೊಟ್ಟಿಗೆ ಕೆಲವೊಂದು ಸಂಭಾವ್ಯಸ್ವರಸಂಕ್ರಮಶ್ರೇಣಿಯು ಆಯಾ ರಾಗಗಳ ಸ್ವರೂಪಕ್ಕೆ ಕಲಾದೃಷ್ಟಿಯಿಂದ ಮಾರಕವಾಗುವ ಕಾರಣ ಅಂಥವನ್ನು ಯತ್ನ ಪೂರ್ವಕವಾಗಿ ಬಿಡಬೇಕಾದುದೂ ಅನಿವಾರ್ಯ. ಒಟ್ಟಿನಲ್ಲಿ ಈ ಎಲ್ಲ ಕಾರಣಗಳಿಂದಲೂ ರಾಗ ವೊಂದರ ಗಣಿತೀಯ ಸಂಭಾವ್ಯಸ್ವರಸಂಕ್ರಮಶ್ರೇಣಿಗಿಂತಲೂ ಅದರ ಕಲಾತ್ಮಕ ಸಂಭಾವ್ಯಸ್ವರ ಸಂಕ್ರಮಶ್ರೇಣಿಯು ಹ್ರಸ್ವವಾಗುವುದು ಯಥಾರ್ಥ, ತರ್ಕಸುವೇದ್ಯ. ಇಂಥ ಸುಪರಿಮಿತಸ್ವರಸಂಕ್ರಮಶ್ರೇಣಿಯನ್ನು ಆಲಾಪನೆ, ತಾನ, ಪಲ್ಲವಿ, ಕೃತಿ, ಸ್ವರಕಲ್ಪನೆ, ಜತಿ-ಸ್ವರ(ಸ್ವರ-ಜತಿ), ನೆರವಲ್ ಮುಂತಾದ ವಿಬಿsನ್ನ ರೂಪಗಳಲ್ಲಿ ಎರಕಹುಯ್ಯುವುದರ ಮೂಲಕ (ಮುಖ್ಯವಾಗಿ ಆಲಾಪನ-ಸ್ವರ-ಲಯ-ಸಾಹಿತ್ಯಗಳ ಆಕೃತಿವಿಧಾನಗಳ ಆಶ್ರಯದಿಂದ) ಇನ್ನಷ್ಟು ವೈವಿಧ್ಯವನ್ನು ತೋರಬಹುದೆಂದರೂ ಇದು ಪ್ರಥಮಸ್ತರದ ವೈವಿಧ್ಯವಲ್ಲವೆಂಬುದನ್ನು ಮರೆಯ ಲಾಗದು. ಅಲ್ಲದೆ ಒಂದು ಬಗೆಯ ಆಕೃತಿಯಲ್ಲಿ ಬಳಕೆಗೊಂಡ ಸ್ವರಸಂಕ್ರಮಶ್ರೇಣಿಯನ್ನೇ ಮತ್ತೊಂದು ಬಗೆಯ ಆಕೃತಿಗೂ (ಉದಾ :- ಆಲಾಪನೆಯ ಸಂಚಾರಗಳನ್ನೇ ಯಥಾವತ್ತಾಗಿ ಕೃತಿಯಲ್ಲಿಯೂ, ಕೃತಿಯಲ್ಲಿಯ ಧಾತುವನ್ನೇ ಕಲ್ಪನಸ್ವರಗಳಿಗೂ, ಕಲ್ಪನಸ್ವರಗಳ ಕ್ರಮವನ್ನೇ ನೆರವಲಿಗೂ ಅವ್ಯವಧಾನವಾಗಿ ಬಳಸುವುದು) ಅನ್ವಯಿಸಿದಾಗ ಪರಿಣತಮತಿಗಳಾದ ರಸಿಕವಿಜ್ಞ ರಿಗೆ ಪುನರುಕ್ತಿಯ ಪಾರಮ್ಯ ಎದ್ದುತೋರದಿರದು. ಪುನರುಕ್ತಿಯು ಸೌಂದರ್‍ಯಸ್ಥಾಪನೆಗೊಂದು ಮುಖ್ಯಾಲಂಬನವೆಂದರೂ `ವೀಪ್ಸಾಯಾಂ ದ್ವಿರುಕ್ತಿಃ’ ಎಂಬ ನ್ಯಾಯದಂತೆ ಎರಡು ಬಾರಿಗಷ್ಟೇ ಶೋಬಿsಸುತ್ತದೆ ; ಹತ್ತು ಹಲವು ಬಾರಿಗಲ್ಲ. ಹೀಗಾಗಿ ಮತ್ತೆ ಮಿತಿಕರಣವೆಂಬುದು ದುರ್ನಿವಾರ್‍ಯ ವಾಗುತ್ತದೆ. ಆದುದರಿಂದ ಯಾವುದೇ ಸಂಪೂರ್ಣ-ರಕ್ತಿಪೂರ್ಣರಾಗವೊಂದರ ಆಲಾಪನೆಯು ಪುನರುಕ್ತಿಯಿಲ್ಲದೆ ಪ್ರಬುದ್ಧನೂ ಸುಶಾರೀರಿಯೂ ಆದ ಕಲ್ಪಕಪ್ರತಿಭೆಯುಳ್ಳ ಗಾಯಕನಿಂದ ಹದಿನೈದಿಪ್ಪತ್ತು ನಿಮಿಷಗಳಿಗಿಂತಲೂ ಮಿಗಿಲಾಗಿ ಸಾಗುವುದು ದುಸ್ಸಂಭಾವ್ಯ. ತಾನವಂತೂ ಇದಕ್ಕಿಂತ ತುಂಬ ಕಡಮೆಯಾಗುವುದು ಅನುಭವ ವೇದ್ಯ. ಇವುಗಳನ್ನು ಹಿಂಬಾಲಿಸಿ ಬರುವ ಪಲ್ಲವಿ ಯಂತೂ ಆಲಾಪನೆಯ ಧಾತುಗಳಿಂದಲೇ ಬಹುಮಟ್ಟಿಗೆ ಮಾಂಸಲವಾಗಿರುವುದು ಸ್ಪಷ್ಟ. ಇಲ್ಲಿಯ ವಿಸ್ತರಣ-ಸ್ವರಕಲ್ಪನೆಗಳಿಗೂ ಈ ನ್ಯಾಯವು ಅನ್ವಯಿಸುವುದು ಯುಕ್ತಿಯುಕ್ತ. ಆದುದರಿಂದ ಪಕ್ಕವಾದ್ಯಗಳ (ಮತ್ತದೇ ಪುನರುಕ್ತಿಯುಳ್ಳ ಧಾತುಗಳು ಇಲ್ಲಿ ಬರುತ್ತವೆ !) ವ್ಯಂಜಕಸಾಮಗ್ರಿ ಯಿಲ್ಲದ ರಾಗ-ತಾನ-ಪಲ್ಲವಿಗಳ ಸ್ವರಸಂಕ್ರಮಶ್ರೇಣಿಯ ಸಮಯವ್ಯಾಪ್ತಿಯು ಅದೆಷ್ಟೆಂದರೂ ಮೂವತ್ತು-ನಲವತ್ತು ನಿಮಿಷಗಳನ್ನು ದಾಟುವುದು ಕಷ್ಟ. ಇವೆಲ್ಲವೂ ತುಂಬ ಆದರ್ಶಸ್ಥಿತಿಯ (ಐಜebಟ ಟಿಜ್ಝಡ್ಝ್ಟಿಟಿ) ಅಂದಾಜೆಂಬುದನ್ನು ನಾವು ಮರೆಯಬಾರದು ! ಇಂತಿರಲು ರಾಗವೊಂದರ ವ್ಯಾಪ್ತಿಯು ಎಷ್ಟರಮಟ್ಟಿನದು ? ಕೆಲವರು ಹೇಳಬಹುದು ; ಗಣಿತೀಯವಾದ ಅಳತೆಗೂ ಕಲಾತ್ಮಕವಾದ ಪ್ರತಿಪಾದನೆಗೂ ತುಂಬ ಅಂತರವಿದೆ. ಸಂಗೀತದಂಥ ಕಲೆಯನ್ನು, ಅತಿಶ್ರೇಷ್ಠಕಲೆಯನ್ನು ಶುಷ್ಕಗಣಿತದ ತರ್ಕದಿಂದ ಅಳೆಯಬಾರದು-ಎಂದು. ಈ ವಾದವೆಷ್ಟರ ಮಟ್ಟಿಗೆ ಸಾಧುವೆಂಬುದನ್ನು ಸ್ವಲ್ಪ ನೋಡೋಣ.

ಯಾವುದೇ ಮೂರ್ತವೂ ಇಂದ್ರಿಯವೇದ್ಯವೂ ಆದ ಸಾಮಗ್ರಿಯು (ಪದಾರ್ಥವು) ಪರಿಚ್ಛಿನ್ನ ವೆಂಬುದು ಪರಮಸತ್ಯ. ಅಲ್ಲದೆ ಯಾವುದೇ ಸಂಗತಿಯು ಸಂವಹನಸಾಧ್ಯ, ಅಬಿsವ್ಯಕ್ತಿವೇದ್ಯ, ವ್ಯವಸ್ಥಾಪ್ಯ, ಪರಿಷ್ಕಾರಸಹ ಎಂದೆಲ್ಲ ಸಾಬೀತಾದ ಬಳಿಕ ಅದು ಪರಿಚ್ಛಿನ್ನವಲ್ಲದೆ ಮತ್ತೇನು ? ವ್ಯಕ್ತವಾಯಿತೆಂದ ಬಳಿಕ ಅದಕ್ಕೊಂದು ಅಂತ್ಯವೆಂಬುದು ಸ್ವತಸ್ಸಿದ್ಧವಿರುವಾಗ ಹೆಚ್ಚಿನ ಚರ್ಚೆಯೇ ಅನವಶ್ಯ. ಇಂತಿರಲು ಸಂಗೀತದ ರಾಗಗಳ ಗಣಿತೀಯವಾದ ಅಳತೆಯು ಅವುಗಳ ವ್ಯಕ್ತೀಕರಣದ ಮಟ್ಟಿಗಂತೂ ಅತ್ಯಂತಸಂಗತ, ಯುಕ್ತಿಯುಕ್ತ. ಅದರ ಕಲಾವೈಷಯಿಕವಾದ ಆಯಾಮವನ್ನು ನಾವೇನೂ ಕಡೆಗಣಿಸುತ್ತಿಲ್ಲ. ಆದರೆ ಅದು ಅನುಭವದ, ಆಸ್ವಾದದ ವಲಯಕ್ಕಷ್ಟೇ ಬರುತ್ತದೆ. ಈ ಬಗೆಗಿನ ಚರ್ಚೆಯು ಕಲಾಸ್ವಾದ ಮೀಮಾಂಸೆ, ಸೌಂದರ್‍ಯತತ್ತ್ವ, ಆನಂದ-ರಸಸ್ಪಂದಗಳ ದಾರ್ಶನಿಕವಲಯಕ್ಕೆ ಸೇರುವ ಕಾರಣ ಇಲ್ಲಿ ಅದರ ಪ್ರಸ್ತಾವವು ಅನಪೇಕ್ಷಿತ. ಆದುದರಿಂದ ಮಥಿತಾರ್ಥವಾಗಿ ಹೇಳುವುದಾದರೆ ರಾಗವೊಂದರ ಗಣಿತೀಯ-ವ್ಯವಹಾರ್ಯ ಸ್ವರಸಂಕ್ರಮಶ್ರೇಣಿ ಸಾಧ್ಯತೆಯು ಈ ಮುನ್ನ ಹೇಳಿ ನಿರೂಪಿಸಿದಂತೆ ದಿಟವಾಗಿ ಪರಿಮಿತವಾದರೂ ಅದರ ಆಸ್ವಾದ-ಆನಂದಗಳು ಅಪರಿಮಿತ. ಈ ಆನಂದದಲ್ಲಿ ತನ್ಮಯನಾದ ಗಾಯಕನು ಮೈಮರೆತು ಮತ್ತೆ ಮತ್ತೆ ಅದೇ ಸ್ವರಸಂಕ್ರಮಶ್ರೇಣಿಯನ್ನು ಪಲುಕಿಸುತ್ತಾನೆ ; ಶ್ರೋತೃವೂ ಸಹ ಅದನ್ನೇ ಮತ್ತೆ ಮತ್ತೆ ಕೇಳಿ ಆನಂದಿಸುತ್ತಾನೆ. ಆನಂದ ವರ್ಧನನು ಹೇಳಿದ `ದೃಷ್ಟಪೂರ್ವಾ ಅಪಿ ಹ್ಯರ್ಥಾಃ ಕಾವ್ಯೇ ರಸಪರಿಗ್ರಹಾತ್ | ಸರ್ವೇ ನವಾ ಇವಾಭಾಂತಿ ಮಧುಮಾಸ ಇವ ದ್ರುಮಾಃ’ (ಪೂರ್ವಪರಿಚಿತವಾದ ಅರ್ಥಗಳೇ ಆದರೂ ರಸದ ಸಂಪರ್ಕ ಬಂದಾಗ ವಸಂತಮಾಸದಲ್ಲಿ ಕಂಗೊಳಿಸುವ ಮರಗಳಂತೆ ಎಲ್ಲವೂ ಹೊಸ ತಾಗಿಯೇ ತೋರುತ್ತದೆ)ಎಂಬ ಮಾತಿನ ಅನುಸಾರ ಸಂಗೀತದಲ್ಲಿಯೂ ಅನುಭವದ (ಆಸ್ವಾದ- ಆನಂದಗಳ) ಆನಂತ್ಯವಿರುವುದಲ್ಲದೆ ರಾಗಮಾಧ್ಯಮದ ಆನಂತ್ಯವಲ್ಲ. ಇಂಥ ಅನುಭವಾ ನಂತ್ಯವು ಎಲ್ಲ ಕಲೆಗಳಲ್ಲಿಯೂ ಉಂಟು. ಅಷ್ಟೇಕೆ, ತೀವ್ರವಾದ ಭಾವನಾಶಕ್ತಿಯುಳ್ಳಾತನಿಗೆ ಸಕಲಾನುಭವಗಳಲ್ಲಿಯೂ ಇಂಥ ಆಸ್ವಾದಾನಂತ್ಯವು ಬಂದೊದಗುವುದು. ಆದುದರಿಂದ ಶಾಸ್ತ್ರೀಯ ಸಂಗೀತದ* ಆಸ್ವಾದಾನಂತ್ಯವು ಬಂದೊದಗುವುದು.

ಆದುದರಿಂದ ಶಾಸ್ತ್ರೀಯ ಸಂಗೀತದ ಅಬಿsಮಾನಿಗಳು ತಮ್ಮ ರಾಗಪ್ರಪಂಚದಲ್ಲಿ ಮಾತ್ರ ಇಂಥ (ದ್ರವ್ಯಸಂಬಂದಿsಯಾದ) ಅನಂತತೆ-ಅಪಾರತೆಗಳುಂಟೆಂದು ಹೆಮ್ಮೆಪಡಬೇಕಿಲ್ಲ. ಈ ಮುನ್ನ ಪ್ರತಿಪಾದಿಸಿದ ರಾಗಗಳ ಸಂಭಾವ್ಯ ಗಣಿತೀಯ ಸ್ವರಸಂಕ್ರಮಶ್ರೇಣಿಯ ಪರಿಮಿತಿಯನ್ನು ಅತ್ಯಂತ ವ್ಯಾಪಕವೆನ್ನಬಹುದಾದ ಸಂಪೂರ್ಣ-ವಕ್ರ-ರಕ್ತಿರಾಗಗಳಲ್ಲಿಯೇ ತಾರ್ಕಿಕ ವಾಗಿ ತೋರಿಸಿ ಅವುಗಳ ಸಮಯಮಿತಿಯನ್ನು ತದನುಸಾರವಾಗಿ ರೂಪಿಸುವ ದಿಗ್ದರ್ಶಕಯತ್ನ ವನ್ನು ಮಾಡಿರುವ ಕಾರಣ ಅಂಥ ವ್ಯಾಪ್ತಿಯಿಲ್ಲದ, ಅಸಂಪೂರ್ಣವೂ ಗಮಕವೈಲಕ್ಷಣ್ಯರಹಿತವೂ ಆದ ಗೌಣರಾಗಗಳಿಗೆ ವ್ಯಾಪ್ತಿಯು ಯಾವ ತೆರನಾದುದೆಂಬುದನ್ನು ಪ್ರತ್ಯೇಕವಾಗಿ ಹೇಳಲೇ ಬೇಕಿಲ್ಲ. ಗಜಪಾದದಲ್ಲಿಯೇ ಅಜಪಾದವೂ ಅಡಗುವಂತೆ, `ಪ್ರಧಾನಮಲ್ಲನಿಬರ್ಹಣ’ ನ್ಯಾಯಾನು ಸಾರವಾಗಿ ಅವುಗಳೂ ಪರಾಸ್ತವಾಗುತ್ತವೆ. ಅವುಗಳ ಸಮಯಕ್ಲಪ್ತಿಯು ಮತ್ತಷ್ಟು, ಇನ್ನಷ್ಟು ಕಿರಿದಾಗುವುದು ವಾಸ್ತವ. ಹೀಗಾಗಿ ಆ ದಿಶೆಯಲ್ಲಿ ಸದ್ಯಕ್ಕೆ ಪರಾಮರ್ಶನವು ಅನಪೇಕ್ಷಿತ.

ಇನ್ನು ತಾಳಗಳ ಬಗೆಗೆ ಸ್ಥೂಲವಾಗಿ ಗಮನಿಸೋಣ. ನೂರೆಂಟು ದೇಶೀ ತಾಳಗಳೆಂದೂ ನೂರ ಎಪ್ಪತ್ತೈದು ತಾಳಪ್ರಭೇದಗಳೆಂದೂ ಅಪಾರವಿಸ್ತಾರದ ಪರಿವೇಷವನ್ನುಳ್ಳ ಕರ್ಣಾಟಕಸಂಗೀತದ ತಾಳಪ್ರಪಂಚದ `ವೈವಿಧ್ಯ’ದ ಬಗೆಗೆ ಅನೇಕರಿಗೆ ತೀರದ ಹೆಮ್ಮೆ. ಆದರೆ ಎಲ್ಲರೂ ಬಲ್ಲಂತೆ ಸಪ್ತ ಸೂಡಾದಿ ತಾಳಗಳಲ್ಲಿಯೇ ಪರಮತಾತ್ಪರ್ಯವಿದೆಯೆಂದು ವಿಜ್ಞರ ಅಬಿsಮತ, ಪ್ರಯೋಗತಜ್ಞರ ಅನುಭವ. ಆದರೆ ಇಲ್ಲಿಯೂ ಜಾತಿಗಳ ಕೋಲಾಹಲದ ಕಾರಣ ಮೂವತ್ತೈದಾದರೂ ಪ್ರಭೇದಗಳು ಉಂಟೆಂದು, ಅವುಗಳಿಗೆ ಅನ್ವಯವೂ ಇದೆಯೆಂದು ವಿದ್ವಾಂಸರ ಆಗ್ರಹ. ಇವು ಮತ್ತೆ ಪಂಚಗತಿಗಳಲ್ಲಿ ವಿಭಕ್ತಗೊಂಡಾಗ ನೂರ ಎಪ್ಪತ್ತೈದು ಬಗೆಗಳಾಗುವುದೆಂದು ಸಂಶೋಧಕರ ಒಕ್ಕಣೆ. ಹೀಗಾಗಿ ಸರಳೀ ಕರಣವು ಪುನಃ ತೊಡಕಿನ ಸಂಕೀರ್ಣತೆಯಲ್ಲಿಯೇ ಕರಗುತ್ತದೆ. ಆದರೆ ಗತಿಸಂಸ್ಕಾರವುಳ್ಳ ಪ್ರಜ್ಞೆಗೆ ಕೇಳುವುದು ಮೂಲಭೂತವಾಗಿ ನಾಲ್ಕೇ ಗತಿಗಳು. ತ್ರಿಶ್ರ, ಚತುರಶ್ರ, ಮಿಶ್ರ ಮತ್ತು ಖಂಡಗಳೆಂದು ಇವು ಪ್ರಸಿದ್ಧ. ಸಂಕೀರ್ಣಗತಿಯೆಂಬುದು ಉಂಟಾದರೂ ಅದು ನಿರಂತರಾವರ್ತನವಾಗಿ, ಭಾಷಾಪದ ಗತಿ ನಿರಪೇಕ್ಷವಾಗಿ, ಪ್ರತ್ಯೇಕಾವರ್ತಯತಿಸ್ಥೈರ್‍ಯ ನಿರಪೇಕ್ಷವಾಗಿ ಪ್ರತೀತಗೊಳ್ಳದ ಕಾರಣ ಅದು ಕೇವಲ ಲೆಕ್ಕದ ಗತಿಯಷ್ಟೇ ಹೊರತು ವ್ಯವಹಾರಕ್ಕೆ ಸಿಲುಕುವ ಗತಿಯಲ್ಲ. ಇದೇ ರೀತಿ ಸಪ್ತಸೂಡಾ(ಳಾ)ದಿ ತಾಳಗಳಲ್ಲಿಯ ಧ್ರುವ, ಮಠ್ಯ ಮತ್ತು ಅಟ್ಟ(ಆಟ) ತಾಳಗಳೂ ಬಹಿರ್ಭೂತವಾಗುತ್ತವೆ. ಏಕೆಂದರೆ ಸಾಮಾನ್ಯವಾದ ವಾಡಿಕೆಯಲ್ಲಿ ಈ ತಾಳಗಳು ಕ್ರಮವಾಗಿ ಹದಿನಾಲ್ಕು, ಹತ್ತು ಮತ್ತು ಹದಿನಾಲ್ಕು ಅಕ್ಷರ ಕಾಲದವುಗಳಾಗಿದ್ದು ಇವುಗಳು ಸಂಕೀರ್ಣಗತಿಯ ಬಗೆಗೆ ನಾವು ಈ ಮುನ್ನ ಮುಂದಿರಿಸಿದ ವಾದಾನುಸಾರವಾಗಿ ಕಂಡಾಗ ಪರಾಸ್ತವಾಗುತ್ತವೆ. ಏಕೆಂದರೆ ಧ್ರುವತಾಳದ ಒಳಗಿನ ಲಘು-ದ್ರುತಾದಿ ವಿನ್ಯಾಸವು ಸಂತುಲಿತ ದ್ರುತಾವರ್ತಗತಿಗೂ, ಮಠ್ಯತಾಳದ ಒಳಗಿನ ಲಘುದ್ರುತವಿನ್ಯಾಸವೂ ಸಹ ಮತ್ತಿದೇ ಸಂತುಲಿತದ್ರುತಾವರ್ತಗತಿಗೂ ನಿರಂತರಾವರ್ತನಶೀಲವಾಗಿ ಬರುವ ಕಾರಣ ಇವಕ್ಕೆ ತ್ರಿಶ್ರ-ಚತುರಶ್ರಗತಿ ನಿರಪೇಕ್ಷವಾದ ಮತ್ತೊಂದು ಸ್ವತಂತ್ರಮೂಲಭೂತಗತಿಯಿಲ್ಲದೆ ಇವೆರಡೂ, ಇಲ್ಲವೇ ಒಟ್ಟಾಗಿ ಸಂತುಲಿತ ದ್ರುತಾವರ್ತದ ಗತಿಗೋ ಅಥವಾ ಮೂಲಲಯಾನುಸಾರವಾಗಿ ಒಡೆದುಕೊಂಡಾಗ ಕ್ರಮವಾಗಿ ಮಿಶ್ರ ಹಾಗೂ ಖಂಡಗತಿಗಳಿಗೋ ಬದ್ಧವಾಗಿ ಸಾಗುತ್ತವೆ. ಇನ್ನು ಅಟ್ಟ(ಆಟ)ತಾಳವೂ ಸಹ ಮೂಲಲಯಾನುಸಾರವಾಗಿ ಒಡೆದು ಮಿಶ್ರಗತಿಯಾಗುತ್ತದೆ ಅಥವಾ ಒಂದಕ್ಷರ ಪ್ರಮಾಣವನ್ನು ಅನಾಗತವಾಗಿ ಸೇರಿಸಿಕೊಂಡೋ ಆವರ್ತನಾನಂತ್ಯದಲ್ಲಿ ಜೋಡಿಸಿ ಕೊಂಡೋ ಖಂಡಗತಿಗೆ ನುಸುಳುತ್ತದೆ. (ಆದರೆ ಚತುರಸ್ರತೆಯ ಚೌಕದ ಲಯವರ್ತನೆಯನ್ನು ಗಮನಿಸಿಕೊಂಡಾಗ ಅಟ್ಟತಾಳವು ಮಿಶ್ರಗತಿಗೇ ಓಲುವುದು ಹೆಚ್ಚು ಸಮಂಜಸ, ಸಂಭಾವ್ಯ).

ಇನ್ನು ಝಂಪೆತಾಳದ ಏಳಕ್ಷರಕಾಲದ ಲಘು ಹಾಗೂ ಒಂದೊಂದು ದ್ರುತ ಅನುದ್ರುತಗಳು ಖಂಡಗತಿ ಯಾಗಿಯೇ ಒಡೆದುಕೊಳ್ಳುವುದು ಸುವೇದ್ಯ. ಹೀಗಿರಲು ಉಳಿಯುವುದು ಈ ಏಳುತಾಳಗಳಲ್ಲಿ ನಾಲ್ಕೇ ಗತಿಗಳು. ಅವು ತ್ರಿಶ್ರ, ಚತುರಶ್ರ, ಮಿಶ್ರ ಹಾಗೂ ಖಂಡಗಳಲ್ಲದೆ ಮತ್ತೇನು ? ಇಂತಿರಲು ಲೆಕ್ಕಕ್ಕೆ ಮಾತ್ರ ಎಟುಕುವ ತಾಳಗಳ ಅನೇಕಪ್ರಕಾರಕ್ಕೆ ನೆಲೆಯೇನೆಂಬ ಪ್ರಶ್ನೆ ಬರುವುದುಂಟು. ಮೂಲಭೂತವಾದ ಜತಿಗಳಲ್ಲಿ ಬೇರೆ ಬೇರೆ ರೀತಿಯ ಸಂಯೋಜನೆಯನ್ನು – ಅತ್ಯಂತ ಪ್ರಾಥಮಿಕವಾದ ನಾಲ್ಕು ಗತಿಗಳಿಗೆ ಅನುಸಾರವಾಗಿ – ಮಾಡಿದಾಗ ಪ್ರತಿಯೊಂದು ಆವರ್ತದಲ್ಲಿಯೂ ಆಯಾ ಗತ್ಯನುಸಾರ ಏಕರೂಪದ ಲಯವನ್ನು ಹೊಂದಿದ್ದರೂ ಬೇರೆ ಬೇರೆ ಜತಿಗಳ (ಅಂದರೆ ಪಾಟಾಕ್ಷರಗಳ) ವಿನ್ಯಾಸವನ್ನು ಹೊಂದಿರುವುದು ಸಹಜ, ಶಕ್ಯ ಕೂಡ. ಆದರೆ ಇಂಥ ಅವಾಂತರ ವೈವಿಧ್ಯವನ್ನಾಗಲಿ, ಆಗಂತುಕ ವೈವಿಧ್ಯವನ್ನಾಗಲಿ ಮೂಲಗತಿಗಳಲ್ಲಿ (ಮೂಲ ತಾಳಗಳಲ್ಲಿ) ಬಂದ ವೈವಿಧ್ಯವೆನ್ನಲಾಗದು. ಅಲ್ಲದೆ ಇದು ಸ್ಥಿರವಾದ, ಸ್ವತಂತ್ರವಾದ ವೈವಿಧ್ಯವೂ ಅಲ್ಲ. ಇಷ್ಟುಮಾತ್ರವಲ್ಲ, ಸ್ವತಂತ್ರವಲ್ಲದ ಲಯಗಳನ್ನು ಸಂಗೀತದಲ್ಲಿ ಪ್ರತೀತ ಗೊಳಿಸಬೇಕೆಂಬ ಮಹತ್ತ್ವಾಕಾಂಕ್ಷೆಯಿಂದ ಕರತಲಾಸ್ಫಾಲನದ ಮೂಲಕ ಕೃತಕವಾಗಿ ಅಕ್ಷರಕಾಲ ಗಳ ಎಣಿಕೆಯನ್ನು ತೋರಲೆಳಸುವ ತಾಲಕ್ರಿಯೆಯು ಕೇವಲ ಚಾಕ್ಷುಷಕರ್ಮವಾಗುವುದಲ್ಲದೆ ಶ್ರಾವಣಧರ್ಮವಾಗದು. ಅಲ್ಲದೆ ಎಡಪ್ಪು, ಎತ್ತುಗಡೆ, ಹುಸಿಪೆಟ್ಟು, ಅತೀತ, ಅನಾಗತಗಳಂಥ ತಂತ್ರ ಗಳಿಂದ ಪರತಂತ್ರಲಯಗಳನ್ನು ಸ್ವತಂತ್ರಲಯಗಳನ್ನಾಗಿಸಿಕೊಳ್ಳುವ ಶೀರ್ಷಾಸನಪ್ರಕ್ರಿಯೆಯೂ ಈ ನಿಗಮನಕ್ಕೆ ಪೂರಕವಾಗಿದೆ. ಮಾತ್ರವಲ್ಲ, ಲಯದ ಚತುರಸ್ರಾತ್ಮಕವಾದ ಆವರ್ತನಶೀಲತೆಗೆ ಇಂಥ ಅಸ್ವತಂತ್ರ ಲಯಗಳು (ಅಥವಾ ಗತ್ಯಾಭಾಸಗಳು) ಹೊಂದಿಕೊಳ್ಳದಿರುವುದು ಇನ್ನೊಂದು ಗಂಬಿsರಕಾರಣವಾಗಿದೆ.

ಆದುದರಿಂದ ಇಂಥ ಎಲ್ಲ `ತಾಳಪ್ರಯತ್ನ’ಗಳೂ ಸಹ ಸ್ವತಂತ್ರವಾಗಿ, ಮೂಲಭೂತವಾಗಿ, ಲಯಪ್ರಜ್ಞಾಸಂಪನ್ನವಾದ ಛಂದಸ್ತಜ್ಞರ ಗತಿಪ್ರಬುದ್ಧತಾ ಸಂವೇದನಾನುಸಾರ ವಾಗಿ ಮೂಡುವ ಆದ್ಯಗತಿಗಳಿಗೆ ಏಕದೇಶೀಯವೂ ಔಪಾದಿsಕವೂ ಆದ ಆಂಶಿಕ ವೈವಿಧ್ಯವನ್ನು ತರುವಲ್ಲಿ ಹೆಣಗಿವೆ ; ಅಷ್ಟೆ. ಆದರೆ ಇದೆಲ್ಲ ಲಯಾನ್ವಿತಚ್ಛಂದೋ ಬಂಧದೊಳಗೆ ಬರುವಂಥ ಒಂದೊಂದು ಛಂದಃಪದ ವಿನ್ಯಾಸವನ್ನೂ ಒಂದೊಂದು ಸ್ವತಂತ್ರ ವೃತ್ತಬಂಧವೆಂಬಷ್ಟೇ ವಿಭಾಗೈಕ ಪ್ರೀತಿಯ ಅತಾರ್ಕಿಕಕೃಷಿಯಾಗದೆ ಮತ್ತೇನೂ ಅಲ್ಲ. ಆದುದರಿಂದ ಮಥಿತಾರ್ಥವಾಗಿ ಹೇಳು ವುದಾದರೆ ನಮ್ಮ ಸಂಗೀತದ ತಾಳಗಳ ವೈವಿಧ್ಯವೂ ಸಹ ಮೂಲತಃ ನಾಲ್ಕು ಬಗೆಗಷ್ಟೇ ಸೀಮಿತ ವಾಗುತ್ತದೆ. ಹೀಗಾಗಿ ಇಲ್ಲಿಯೂ ಅಪಾರತೆ, ಅನಂತತೆಗಳನ್ನು ಆಸ್ವಾದದೃಷ್ಟಿಯಿಂದಲೇ ಹೇಳ ಬೇಕಲ್ಲದೆ ಮಾಧ್ಯಮದ ಸಾಧ್ಯತೆಗಳ ದೃಷ್ಟಿಯಿಂದಲ್ಲ. ನಮ್ಮ ಕಲೆಗಳ ತಂತ್ರ ಹಾಗೂ ಆಸ್ವಾದದೃಷ್ಟಿಗಳಲ್ಲಿ ಇಂಥ demystification (ತರ್ಕ ಶುದ್ಧಿಯ ತತ್ತ್ವಪರಿಷ್ಕಾರ) ಅವುಗಳ ಹಿತಕ್ಕಾಗಿ ಅವಶ್ಯವೆಂದೂ ನಮ್ಮ ಬೋಧಸಿದ್ಧಿಗಾಗಿ ಮತ್ತೂ ಅವಶ್ಯವೆಂದೂ ತೋರಿದ ಕಾರಣ ಈ ಅಲ್ಪೋಪಕ್ರಮವಲ್ಲದೆ Iconoclastic (ವಿಗ್ರಹ ಭಂಜನಾತ್ಮಕ) ಧ್ಯೇಯಕ್ಕಲ್ಲವೆಂದು ಮತ್ತೊಮ್ಮೆ ವಿನಂತಿಸಿ ವಿರಮಿಸುವೆ.

 

– ಶತಾವಧಾನಿ ಡಾ|| ಆರ್. ಗಣೇಶ್

* ಈ ಲೇಖನದಲ್ಲಿ ಪ್ರಧಾನವಾಗಿ ಕರ್ಣಾಟಕಸಂಗೀತದ ಪರಿಭಾಷೆಯನ್ನು ಬಳಸಿದ್ದರೂ ಇದರ ತರ್ಕ-ಯುಕ್ತಿ-ವಿಚಾರಫಲಿತಗಳು ಹಿಂದೂಸ್ತಾನಿಸಂಗೀತಕ್ಕೂ ಇನ್ನಾವುದೇ ಸಂಗೀತಪ್ರಕಾರಕ್ಕೂ ಯಥೋಚಿತವಾಗಿ-ನಿರಪವಾದವಾಗಿ-ಅನ್ವಯಿಸುತ್ತದೆ.
Advertisements

November 22, 2007 - Posted by | KANNADA KARNATAKA

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: