Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಅಳಿಯದೇವರಿಗೆ ಅನ್ಯಾಯ!

ಅಳಿಯದೇವರಿಗೆ ಅನ್ಯಾಯ!

http://sampada.net/article/2117

Tags: | ಕರ್ತೃ benaka ದಿನಾಂಕ Thu, 17/08/2006 – 10:34

“ಅಗಣಿತ ತಾರಾಗಣಗಳ ನಡುವೆ ಚಂದ್ರಗೆ ಮೆರವಣಿಗೆ….
ಬಾನಲಿ ಚಂದ್ರಗೆ ಮೆರವಣಿಗೆ…..”
ಶಬ್ದಗಾರುಡಿಗ ವರಕವಿ ಬೇಂದ್ರೆಯವರ ಕವನದ ಈ ಸಾಲುಗಳನ್ನು ಮೆಲುಕುಹಾಕುತ್ತಾ ಇರುಳಿನಾಗಸದಲ್ಲಿ ದಿಟ್ಟಿ ನೆಟ್ಟವನಿಗೆ ‘ಹೌದಲ್ಲವೇ’ ಎನಿಸದಿರದು. ಈ ‘ಅಕ್ಷಿನಿಮೀಲನ ಮಾಡುವ ನಕ್ಷತ್ರಗಳು’ ಅಗಣಿತವೆಂಬುದು ಎಲ್ಲರಿಗೂ ಗೊತ್ತು; ಆದರೆ ಕಣ್ಣೆವೆಯಿಕ್ಕದ ಚುಕ್ಕಿಗಳ ಅಂದರೆ ಗ್ರಹಗಳ ಸಂಖ್ಯೆ ಎಷ್ಟೆಂದು ಎಲ್ಲರಿಗೂ ತಿಳಿದಿದೆಯಲ್ಲವೇ. ಸೌರವ್ಯೂಹದ ಮಟ್ಟಿಗಂತೂ ಗ್ರಹಗಳು ಒಂಬತ್ತು ಎಂದು ಎಲ್ಲರಿಗೂ ತಿಳಿದಿದೆ ಎನ್ನುವಿರಾ? ಇಂದಿನಿಂದ ಸೆರೆಸ್, ಶಾರನ್, ಕ್ಸೇನ ಈ ಮೂರನ್ನು ಸೇರಿಸಿಕೊಳ್ಳಿ – ಒಟ್ಟು ಹನ್ನೆರಡು ಗ್ರಹಗಳು! ಅಯ್ಯಯ್ಯೋ ಎಂಥಾ ಕೆಲಸವಾಯಿತು ಸ್ವಾಮೀ, ಇನ್ನುಮುಂದೆ ಅಳಿಯನನ್ನು ಹತ್ತನೇ ಗ್ರಹವೆಂದು ಕರೆಯುವ ಭಾಗ್ಯ ಹೋಯಿತಲ್ಲಾ ಎಂದು ಹೆಣ್ಣುಹೆತ್ತವರು ಪೇಚಾಡಬೇಕೇನೋ! ಹೋಗಲಿ ಹದಿಮೂರನೆ ಗ್ರಹವೆನ್ನೋಣವೇ ಎಂದರೆ, ಊಹ್ಞೂಂ! ಸಾಧ್ಯವಿಲ್ಲ; ಈಗಾಗಲೇ ಮತ್ತೊಂದಿಷ್ಟು ಉಂಡೆಗಳು ಗ್ರಹಗಳಾಗಲು ಕಾಯುತ್ತಿವೆ!

ಯುರೇನಸ್, ನೆಪ್ಚೂನ್, ಪ್ಲೂಟೋಗಳನ್ನು ಗ್ರಹಗಳೆಂದಾಗ ಭಾರತೀಯರು ಯಥಾಪ್ರಕಾರ ‘ತಮಗೆಲ್ಲಾ ಮೊದಲೇ ತಿಳಿದಿತ್ತೆಂಬ’ ವಿಶ್ವವಿಖ್ಯಾತ ಮನೋಭಾವದಿಂದ, ಇಂದ್ರ-ನಿರ್‍ಋತಿ-ವರುಣ ಎಂದು ಅವಕ್ಕೆ ಹೆಸರಿಟ್ಟು ನಗೆಪಾಟಲಿಗೀಡಾದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಮೂರಕ್ಕೆ ಏನು ಹೆಸರಿಡುತ್ತಾರೋ ನೋಡಬೇಕು! ಮೂರೇನು ಮೂವತ್ತಾಗಲಿ, ರವಿಯ ಸುತ್ತಲೂ ಚೆಲ್ಲಿಕೊಂಡು ಉಂಡೆಗಳಾಗಿ ದಿಕ್ಕಾಪಾಲಾದವಕ್ಕೆಲ್ಲಾ, ದಿಕ್ಪಾಲಕರ ಹೆಸರಿಟ್ಟು ಕೈಮುಗಿದರೆ ಆಯಿತು! ಇನ್ನು ಜೋಯಿಸರ ಪಾಡೇನು? ಹೊಟ್ಟೆಪಾಡಿಗೇನೂ ತೊಂದರೆಯಿಲ್ಲ ಬಿಡಿ; ಹೊಸ ಗ್ರಹಗಳ ದಶಾ-ಭುಕ್ತಿಗಳನ್ನು, ಗೋಚಾರಫಲಗಳನ್ನು ಸೃಷ್ಟಿಸಿ, ಏಳರಾಟ-ಎಂಟರಾಟ-ಸಣ್ಣಾಟ-ದೊಡ್ಡಾಟ ಎಲ್ಲ ಆಟಗಳನ್ನೂ ಆಡಿಸಿ, ತಕ್ಕ ಶಾಂತಿ ಮಾಡಿಸಿಬಿಡುತ್ತಾರೆ! ಅಂತೂ ಸೆರೆಸ್-ಶಾರನ್-ಕ್ಸೇನ ಗಳು ಸದ್ಯದಲ್ಲೇ ಸುರಸಾ-ಶಾರ್ಙ-ವಿಶ್ವಕ್ಸೇನ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸುತ್ತಿದೆ! ಈ ಮಧ್ಯೆ ‘ಒಫಿಯುಕಸ್’ ‍- ‘ಉರಗಧರ’ ಎಂಬ ಹದಿಮೂರನೇ ರಾಶಿಯನ್ನೂ ಸೇರಿಸಬೇಕೆಂದು ಒತ್ತಾಯಿಸುವವರು ಹೆಚ್ಚಬಹುದೇನೋ!

ಜ್ಯೋತಿಷ ತಿಳಿದವರಿಗೆ ಈ ಹಾಸ್ಯ ಮುದನೀಡುತ್ತದೆ:

ಸದಾ ವಕ್ರೀ ಸದಾ ಕ್ರೂರೀ ಸದಾ ಪೂಜಾಮಪೇಕ್ಷತೇ |
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮಗ್ರಹಃ ||

ಸದಾ ಹಿಮ್ಮುಖನಾಗಿ ಚಲಿಸುವ(ವಕ್ರ ನಡೆ-ನುಡಿಯ), ಸದಾ ಶಾಂತಿಪೂಜೆ(ಉಪಚಾರ)ಗಳನ್ನು ಬಯಸುವ
ಸದಾ ಕನ್ಯಾ ರಾಶಿ(ಹೆಂಡತಿಯ ಮನೆ)ಯಲ್ಲೇ ಇರುವ ಅಳಿಯನೇ ಹತ್ತನೆಯ ಗ್ರಹ!

ಇನ್ನು ಈ ಹಾಸ್ಯಕ್ಕೆ ಜಾಗವಿಲ್ಲವೇನೋ! ಅಳಿಯಂದಿರು ನಿಟ್ಟುಸಿರಿಡಬಹುದು! ಒಟ್ಟಿನಲ್ಲಿ, ಕೆಲವರಿಗೆ ಶುಕ್ರದಶೆಯಾದರೆ[ಏಳಿಗೆ], ಹಳೆಯ ಪಠ್ಯಗಳಿಗೆ ಅಷ್ಟಮಶನಿ[ಜೀವಭಯ]!
ಏನೇ ಆಗಲಿ, ಅಳಿಯದೇವರ ‘ಗ್ರಹ’ ಸ್ಥಿತಿ ಅಳಿದದ್ದು ಮಾತ್ರ ಅನ್ಯಾಯ!

ನಿಮ್ಮವ
ಬೆನಕ

rating

login or register to post comments | delicious | google | yahoo | 219 ಬಾರಿ ಓದಲ್ಪಟ್ಟಿದೆ

benaka ನ ಚಿತ್ರ

ಅಳಿಯದೇವರು:ತಿದ್ದುಪಡಿ benaka | Thu, 17/08/2006 – 12:38

ಗೆಳೆಯರೇ,
ಮೇಲಿನ ಹಾಸ್ಯಕಾವ್ಯದ ತಾತ್ಪರ್ಯದಲ್ಲಿ, ಉದ್ದೇಶಪೂರ್ವಕವಾಗಿ ಅಲ್ಲವಾದರೂ,
‘ಸದಾ ಕ್ರೂರೀ’ = ಸದಾ ಕಷ್ಟನೀಡುವ(ಕಾಟಕೊಡುವ) ಎಂಬುದು ಬಿಟ್ಟುಹೋಗಿದೆ; ದಯವಿಟ್ಟು ಸೇರಿಸಿಕೊಳ್ಳಿ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ahoratra ನ ಚಿತ್ರ

ಆ.ರಾ. ಮಿತ್ರರ ಬರಹವನ್ನು ಹೋಲುವ ಹಾಸ್ಯ ಬೆನಕರದು. ahoratra | Thu, 17/08/2006 – 16:05

ಸವಿಯಾದ ಹಾಸ್ಯ.

ಅಹೋರಾತ್ರ

benaka ನ ಚಿತ್ರ

ಕತ್ತೆಮರಿ benaka | Fri, 18/08/2006 – 07:54

ಅಹೋರಾತ್ರರೆ,
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು! ಎಲ್ಲಿ ಇತ್ತೀಚೆಗೆ ಹೆಚ್ಚಾಗಿ ನಿಮ್ಮ ಬರಹ ಕಾಣದಲ್ಲಾ? ‘ಸ್ವಾತಂತ್ರ್ಯದ ಮಂತ್ರ’ ಚೆನ್ನಾಗಿದೆ; ಹೀಗೆಯೇ ಬರೆಯುತ್ತಿರಿ.

ಅ.ರಾ.ಮಿತ್ರರೆಂದರೆ ನನಗೆ ನೆನಪಾಗುವುದು ಅವರು ಸದಾ ಹೇಳುವ ಈ ಹಾಸ್ಯ:

ಕತ್ತೆಮರಿ ಚಿಕ್ಕಂದಿನಲ್ಲಿ ಬಹಳ ಚೆನ್ನಿತ್ತು!
ದೊಡ್ಡದಾದ ಮೇಲೆ ಅದರಪ್ಪನಂತಾಗಿ ತಾನೂ ಹಾಳಾಯ್ತು!

ಬರಲೇ,

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

benaka ನ ಚಿತ್ರ

ಅಳಿಯಾಟ! benaka | Thu, 24/08/2006 – 07:17

ಇದಪ್ಪಾ ವರಸೆ!
ಹತ್ತನೇ ಗ್ರಹದ ಆಗ್ರಹಕ್ಕೆ ಸಿಲುಕಿ, ನಿಲುಕದಷ್ಟು ದೂರದಲ್ಲಿ ಕಾಯುತ್ತಿದ್ದ ಉಂಡೆಗಳೆಲ್ಲಾ ಪೆಚ್ಚಾಗಿಹೋದವು! ಅವೆಲ್ಲಾ ಗ್ರಹಗಳಾಗುವುದಿರಲಿ, ಮೊನ್ನೆ ತಾನೆ ಗ್ರಹಪೀಠವನ್ನೇರಿದ್ದ ಸೆರೆಸ್, ಶಾರನ್, ಕ್ಸೇನ ಕೂಡ ತಮ್ಮ ಸಿಂಹಾಸನವನ್ನು ಕಳೆದುಕೊಂಡು ಹಿಗ್ಗೆಲ್ಲ ಶಿವಕಾಶಿಯ ಪಟಾಕಿಯಂತೆ ಥುಸ್ಸ್….. !!! ಸಾಲದ್ದಕ್ಕೆ ಮೃತ್ಯುದೇವತೆ ನಿರ್ಋತಿಯ ಹೆಸರಿಟ್ಟುಕೊಂಡ ಪ್ಲೂಟೋದ ಗ್ರಹತ್ವಕ್ಕೇ ಮೃತ್ಯು! ಏನೇನೋ ಬಡಬಡಿಸುತ್ತಿದ್ದೇನೆಯೇ? ಆಗಿದ್ದು ಇಷ್ಟೇ:

ಮೊನ್ನೆ ತಾನೆ ಮೂರು ಗ್ರಹಗಳನ್ನು ಸೌರವ್ಯೂಹಕ್ಕೆ ಸೇರಿಸಿದ ಖಗೋಳತಜ್ಞರು ಇಂದು ಆ ಮೂರಿರಲಿ, ಜೊತೆಗೆ ಪ್ಲೂಟೋವನ್ನೂ ‘ಗ್ರಹ’ ಎಂದು ಪರಿಗಣಿಸಬಾರದೆಂದು ಅಂತರ್ರಾಷ್ಟ್ರೀಯ ಖಗೋಳಶಾಸ್ತ್ರ ಸಹಕಾರ ಸಂಘದ ಅಧಿವೇಶನದಲ್ಲಿ ನಿರ್ಣಯಿಸಿದ್ದಾರೆ. ಆದ್ದರಿಂದ ಈಗ ಸೌರವ್ಯೂಹದ ಗ್ರಹಗಳ ಸಂಖ್ಯೆ ಎಂಟು! ಒಂದೆಡೆ ಪಠ್ಯಪುಸ್ತಕಗಳು ಬದಲಾಗುವ ಚಿಂತೆಯಾದರೆ, ಅಳಿಯದೇವರಿಗೆಲ್ಲಾ ಮತ್ತೆ ಗ್ರ-ಹಾ-ಸ್ಯದ ಕಿರಿಕಿರಿ! ಈ ಬಾರಿ ಹತ್ತರಿಂದ ಒಂಬತ್ತಕೇರಿದ ಸ್ಥಿತಿಯಿಂದ ಹಿಗ್ಗುವುದೇನೂ ಇಲ್ಲವೇನೋ! ಯಾವುದು ಗ್ರಹವೆಂಬ ಚಿಂತೆ ಖಗೋಳಶಾಸ್ತ್ರಿಗಳಿಗಾದರೆ, ಇತ್ತ ಜ್ಯೋತಿಷಶಾಸ್ತ್ರಿಗಳಿಗೆ ಗ್ರಹಗಳು ಹೆಚ್ಚದೆ ನಿಶ್ಚಿಂತೆ! ಜೋಯಿಸರೆನ್ನುತ್ತಾರೆ:
“ಅಲ್ಲಾ ಸ್ವಾಮೀ, ಶನಿಗ್ರಹದ ನಂತರ ಬರಿಗಣ್ಣಿಗೆ ಕಾಣದವು ಗ್ರಹಗಳೇ ಅಲ್ಲ! ರಾಹು-ಕೇತುಗಳು ನೆರಳಿನಂತಹ ಬಿಂದುಗಳು; ಇವೆರಡನ್ನೂ ಸೇರಿಸಿ ಒಟ್ಟು ಗ್ರಹಗಳು ಒಂಬತ್ತೇ!”
“ಮತ್ತೆ, ಇಂದ್ರ, ವರುಣ, ನಿರ್‍ಋತಿ?”
“ಅವುಗಳನ್ನು ಸೇರಿಸಿದ್ದು ಭಾರತೀಯ ಜ್ಯೋತಿಷವಲ್ಲ; ತಿಳಿಗೇಡಿ ಜೋಯಿಸರು!”
“ಉಳಿದ ಗ್ರಹಗಳ ಬಗ್ಗೆ ಏನೆನ್ನುತ್ತೀರಿ?”
“ಅವೆಲ್ಲವನ್ನೂ ಅಳಿಯನಲ್ಲಿ ಆವಾಹಿಸಿಬಿಟ್ಟಿದ್ದೇವಲ್ಲ! ಹೆಹ್ಹೆಹ್ಹೆ….” ಎನ್ನುತ್ತಾ ಹಲ್ಲುಕಿರಿದರು!
ಎಂಬಲ್ಲಿಗೆ, ಅಳಿಯನ ಗ್ರಹಸ್ಥಿತಿ ಎಂದೆಂದೂ ಅಳಿಯದೇ, ಪೆಣ್‍ಪೆತ್ತವರಿಗೆ ಹತ್ತನೆಯ(?) ಗ್ರಹದ ಗ್ರಹಣ ತಪ್ಪಿದ್ದಲ್ಲವೆಂದಾಯಿತು! ಒಂಬತ್ತನೇ ಗ್ರಹವೇ ಇಲ್ಲದಿರುವಾಗ ಹತ್ತನೆಯದೆಲ್ಲೆಂದು ಅಳಿಯನಿಲ್ಲದ ಖಗೋಳಜ್ಞರು ಫಕಫಕನೆ ನಕ್ಕಾರು! ಎಚ್ಚರಿಕೆ ಸ್ವಾಮೀ, ಅಳಿಯಾಟ ಶುರುವಾದೀತು!

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

Comment viewing options

Flat list – collapsedFlat list – expandedThreaded list – collapsedThreaded list – expanded

Date – newest firstDate – oldest first

10 comments per page30 comments per page50 comments per page70 comments per page90 comments per page150 comments per page200 comments per page250 comments per page300 comments per page

Select your preferred way to display the comments and click “Save settings” to activate your changes.

Similar entries

Advertisements

August 27, 2006 - Posted by | History of Karnataka, SAMPADA KANNADA

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: